Thursday, May 28, 2009

ಎಲ್ಲಿರುವೆ ನೀನು?

ಏನು ಅರಿಯದ ಮುದ್ದು ಕಂದನು ನಾನು
ಹುಡುಕುತಿರುವೆ ನಿನ್ನ
ಸಿಗಲಿಲ್ಲ ನೀನು ನನ್ನ ಮುದ್ದು ಮಾತಿನಲಿ
ಇರಲಿಲ್ಲ ನೀನು ನಾ ಕದ್ದ ಬೆಣ್ಣೆಯಲಿ
ಆದರೂ ಹುಡುಕಿ ಬಿಟ್ಟೆನು ನಿನ್ನ
ನನ್ನ ತುಂಟಾಟಕ್ಕೂ ಮುತ್ತಿಟ್ಟ ತಾಯಿಯಲಿ

ಸರಿ ತಪ್ಪು ತಿಳಿಯದ ಬಾಲಕನು ನಾನು
ಹುಡುಕುತಿರುವೆ ನಿನ್ನ
ಸಿಗಲಿಲ್ಲ ನೀನು ನಾ ಕಲಿತ ಪಾಠದಲಿ
ಇರಲಿಲ್ಲ ನೀನು ನಾ ಆಡಿದ ಆಟದಲಿ
ಆದರೂ ಹುಡುಕಿ ಬಿಟ್ಟೆನು ನಿನ್ನ
ನನ್ನ ತಪ್ಪು ದಂಡಿಸಿ ಸರಿ ದಾರಿ ತೋರಿದ ತಂದೆಯಲಿ

ಯೌವನವು ತುಂಬಿರುವ ಯುವಕನು ನಾನು
ಹುಡುಕುತಿರುವೆ ನಿನ್ನ
ಸಿಗಲಿಲ್ಲ ನೀನು ನಾ ಪಡೆದ ಹೊನ್ನಿನಲಿ

ಇರಲಿಲ್ಲ ನೀನು ನಾ ಕೊಂಡ ತುಂಡು ಭೂಮಿಯಲಿ
ಆದರೂ ಹುಡುಕಿ ಬಿಟ್ಟೆನು ನಿನ್ನ
ಕಾಯಕವೇ ಕೈಲಾಸ ಎಂಬಂತೆ ನಾ ಮಾಡಿದ ಕೆಲಸದಲಿ

ಮುಪ್ಪು ಆವರಿಸಿರುವ ಮುದಿಯನು ನಾನು
ಇಂದು ನಾನು ಅರಿತೆ ಮಹಾ ಸತ್ಯವೊಂದನ್ನು
ಈ ಹಿಂದೆ ನನಗೆ ಸಿಕ್ಕಿದ್ದು ನೀನಲ್ಲ
ನಿನ್ನ ಅವತಾರವ ಹೊತ್ತು ಬಂದ ನನ್ನವರು ಅವರೆಲ್ಲ
ಇಂದು ನಾನು ತಿಳಿದೆ ಸಿಗುವುದಿಲ್ಲ ನೀ ನನಗೆ
ಏಕೆಂದರೆ ಹುಡುಕಲಿಲ್ಲ ನಿನ್ನ ನಾನು ನನ್ನೊಳಗೆ

ವಿಷ
(ವಿ. ಶಂಕರ್)

No comments:

Post a Comment