Thursday, May 28, 2009

ಯಾಕೆ ಹೀಗಾಯಿತು?

ಯಾಕಾಯಿತು ನಿನಗೀತರ ಯಾಕಾಯಿತು?
ಏನಾಯಿತು ನಿನಗೀದಿನ ಏನಾಯಿತು?
ಹುಟ್ಟಿದೊಡನೆ ಕನ್ನಡ ನಿನ್ನ ಮಾತೃಭಾಷೆ ಆಯಿತು
ಆದರೇಕೆ ನಿನಗಿಂದು ಇದು ಬೇಡವಾಯಿತು?

ಹುಟ್ಟಿದ್ದು ಬೆಳದಿದ್ದು ಹುಬ್ಬಳ್ಳಿ ಮೈಸೂರು
ಜೀವಿಸಲು ಬೇಕಿಂದು ಅಮೇರಿಕ ಸಿಂಗಪೂರು
ಶಾಲೆಯಲ್ಲಿ ಕಲಿತೆ ನೀನು ಅ ಆ ಇ ಈ
ಕನ್ನಡವೆಂದರೆ ಏಕೆ ನಿನಗೆ ಥು ಥೂ ಛಿ ಛೀ ?

ರೊಟ್ಟಿ ಮುದ್ದೆ ಉಂಡು ಅಂದು ಬುದ್ದಿ ಚುರುಕಾಯಿತಣ್ಣ
ಪಿಜ್ಜಾ ಬರ್ಗರ್ ತಿಂದು ಇಂದು ದೇಹ ದಪ್ಪಗಾಯಿತಣ್ಣ
ಅಂದು ನೀನು ಅತ್ತು ಕರೆದೆ, ತೋರಿಸಪ್ಪ ಜೋಗ
ಏಕೋ ತಮ್ಮ ಇಂದು ಮರೆತೆ ಕನ್ನಡದ ಸೊಬಗ?

ಸಿರಿತನವ ತೋರು ನೀನು ಕನ್ನಡ ಧ್ವಜ ಹಾರಿಸಿ
ಹಿರಿತನವ ಬೀರು ನೀನು ತಾಯಿ ಭುವನೇಶ್ವರಿಗೆ ನಮಸ್ಕರಿಸಿ
ಕನ್ನಡಗಿರ ಒಟ್ಟಾಗಿಸು ಕೈಗೆ ಕೈ ಸೇರಿಸಿ
ಜೈ ಕರ್ನಾಟಕ ಮಾತೆ ಅನ್ನು ಕಾವೇರಿ ತೀರ್ಥ ಸೇವಿಸಿ

ವಿಷ
(ವಿ. ಶಂಕರ್)

ಎಲ್ಲಿರುವೆ ನೀನು?

ಏನು ಅರಿಯದ ಮುದ್ದು ಕಂದನು ನಾನು
ಹುಡುಕುತಿರುವೆ ನಿನ್ನ
ಸಿಗಲಿಲ್ಲ ನೀನು ನನ್ನ ಮುದ್ದು ಮಾತಿನಲಿ
ಇರಲಿಲ್ಲ ನೀನು ನಾ ಕದ್ದ ಬೆಣ್ಣೆಯಲಿ
ಆದರೂ ಹುಡುಕಿ ಬಿಟ್ಟೆನು ನಿನ್ನ
ನನ್ನ ತುಂಟಾಟಕ್ಕೂ ಮುತ್ತಿಟ್ಟ ತಾಯಿಯಲಿ

ಸರಿ ತಪ್ಪು ತಿಳಿಯದ ಬಾಲಕನು ನಾನು
ಹುಡುಕುತಿರುವೆ ನಿನ್ನ
ಸಿಗಲಿಲ್ಲ ನೀನು ನಾ ಕಲಿತ ಪಾಠದಲಿ
ಇರಲಿಲ್ಲ ನೀನು ನಾ ಆಡಿದ ಆಟದಲಿ
ಆದರೂ ಹುಡುಕಿ ಬಿಟ್ಟೆನು ನಿನ್ನ
ನನ್ನ ತಪ್ಪು ದಂಡಿಸಿ ಸರಿ ದಾರಿ ತೋರಿದ ತಂದೆಯಲಿ

ಯೌವನವು ತುಂಬಿರುವ ಯುವಕನು ನಾನು
ಹುಡುಕುತಿರುವೆ ನಿನ್ನ
ಸಿಗಲಿಲ್ಲ ನೀನು ನಾ ಪಡೆದ ಹೊನ್ನಿನಲಿ

ಇರಲಿಲ್ಲ ನೀನು ನಾ ಕೊಂಡ ತುಂಡು ಭೂಮಿಯಲಿ
ಆದರೂ ಹುಡುಕಿ ಬಿಟ್ಟೆನು ನಿನ್ನ
ಕಾಯಕವೇ ಕೈಲಾಸ ಎಂಬಂತೆ ನಾ ಮಾಡಿದ ಕೆಲಸದಲಿ

ಮುಪ್ಪು ಆವರಿಸಿರುವ ಮುದಿಯನು ನಾನು
ಇಂದು ನಾನು ಅರಿತೆ ಮಹಾ ಸತ್ಯವೊಂದನ್ನು
ಈ ಹಿಂದೆ ನನಗೆ ಸಿಕ್ಕಿದ್ದು ನೀನಲ್ಲ
ನಿನ್ನ ಅವತಾರವ ಹೊತ್ತು ಬಂದ ನನ್ನವರು ಅವರೆಲ್ಲ
ಇಂದು ನಾನು ತಿಳಿದೆ ಸಿಗುವುದಿಲ್ಲ ನೀ ನನಗೆ
ಏಕೆಂದರೆ ಹುಡುಕಲಿಲ್ಲ ನಿನ್ನ ನಾನು ನನ್ನೊಳಗೆ

ವಿಷ
(ವಿ. ಶಂಕರ್)

ಹೆಂಡತಿಗೆ ಸೀರೆ

ನನ್ನ ಪ್ರೀತಿಯ ಹೆಂಡತಿ
ಹೃದಯ ಕೋಟೆಯ ಒಡತಿ
ನನ್ನ ಬಾಳ ರಥದ ಸಾರಥಿ
ಕೆಲುವೊಮ್ಮೆ ಯಾಕೆ ಹೀಗೆ ಆಡುತಿ?

ರೇಷ್ಮೆ ಸೀರೆ ಫ್ಯಾನ್ಸಿ ಸೀರೆ ಎಂದು ಕಾಡುವುದೇಕೆ?
ಸಾದಾರಣ ಸೀರೆಯಲ್ಲೂ ನೀ ಹೋಲುವೆ ಮೇನಕೆ
ಆ ಪಾಂಚಾಲಿಯಿಂದ ನೀ ಪಾಠ ಕಲಿತಿಲ್ಲವೇಕೆ?
ಅವಳು ಸೀರೆ ಕೇಳಿದ್ದು ಗಂಡನನಲ್ಲ,
ಅಣ್ಣ ಕೃಷ್ಣನನ್ನೆಂದು ಮರೆತಿರುವೆ ಯಾಕೆ?

ವಿಷ
(ವಿ. ಶಂಕರ್)