Monday, June 22, 2009

ಇಳಿದು ಬಾ

ಇಳಿದು ಬಾ ಕೃಷ್ಣ ಇಳಿದು ಬಾ
ತಾಯಿ ಯಶೋಧೆ ಕರೆಯುತಿಹಳು
ನೀ ಬೇಗ ಕೆಳಗಿಳಿದು ಬಾ

ತಾಯಿಯ ಮೇಲೆ ಮುನಿಸೇಕೆ ಮಗನೇ?
ಏನು ಮಾಡಿದೆನೆಂದು ಮರವೇರಿ ಕೂತಿರುವೆ?
ಕೇಳಿದ್ದ ಕೊಡುವೆ ನಾನೀಗ ನಿನಗೆ
ಸಿಹಿ ಮುತ್ತು ನೀಡು ಕೆಳಗಿಳಿದು ನನಗೆ

ಬೆಣ್ಣೆಯನು ಕಡೆದಿರುವೆ ನೀ ಇಳಿದು ಬಾರೋ
ಅವಲಕ್ಕಿ ತಂದಿರುವೆ ಕೆಳಗಿಳಿದು ನೋಡೋ
ಈ ನಿನ್ನ ಕೊಳಲಿಗೆ ಮರುಜನ್ಮ ನೀಡೋ
ರಾಧೆಯ ಮೊಗವು ನಗುವಂತೆ ಮಾಡೋ

ಅಳುತಿಹರು ಜನರು ಕಂಸನಿಂದ ನೊಂದು
ಜರಾಸಂಧನ ಪಾಪವು ಮುಗಿಲು ಮುಟ್ಟಿದೆ ಇಂದು
ಕಾಪಾಡು ನಮ್ಮನ್ನು ದುಷ್ಟರನು ಕೊಂದು
ದಯೆ ನೀಡು ನಮಗೆ ಕೆಳಗಿಳಿದು ಬಂದು

ಮರವೇರಿರುವ ಕೃಷ್ಣನು ಸ್ನೇಹ ಮಮತೆ ಶಾಂತಿ
ಅವನ ಕರೆವ ಯಶೋಧೆ ನಮ್ಮ ತಾಯಿ ಭಾರತಿ
ನಾವಿಂದು ಕೂಗುವ ಅವನ, ಅವಳೊಂದಿಗೂಡಿ
ಸುಖ ಶಾಂತಿಯ ತಾಣವಾಗಲಿ ನಮ್ಮ ದೇಶದ ಗಡಿ

ಇಳಿದು ಬಾ ಕೃಷ್ಣ ಇಳಿದು ಬಾ
ಭಾರತೀಯರು ನಾವು, ಕರೆಯುತಿಹೆವು
ನೀ ಬೇಗ ಕೆಳಗಿಳಿದು ಬಾ

ವಿ. ಶಂಕರ್
(ವಿಷ)